ಎಲಿಜ಼ಬೆತ್I: 1533-1603. ಇಂಗ್ಲೆಂಡಿನ ರಾಣಿ. ಎಂಟನೆಯ ಹೆನ್ರಿಗೆ ಎರಡನೆಯ ಹೆಂಡತಿಯಾದ ಆನ್ ಬೂಲಿನಳಲ್ಲಿ ಜನಿಸಿದಳು. ತಂದೆಯಂತೆ ಈಕೆ ದೃಢಕಾಯೆ, ಛಲಗಾರ್ತಿ, ಉತ್ಸಾಹಶೀಲೆ. ಇವಳ ಕ್ರೌರ್ಯ ಮುಂಗೋಪಗಳೂ ತಂದೆಯಿಂದ ಪಡೆದ ಗುಣಗಳು.  ಇಂಥ ಗಂಡುಲಕ್ಷಣಗಳೇ ಇವಳಲ್ಲಿ ಹೆಚ್ಚಾಗಿದ್ದರೂ ಹೆಣ್ಣಿನ ಆಕರ್ಷಣೆಯೂ ಇತ್ತು. ತಾಯಿಯಿಂದ ಪಡೆದ ಈ ಗುಣದ ಜೊತೆಗೆ ಆಕೆಯ ಇನ್ನೂ ಕೆಲವು ಗುಣಗಳನ್ನೂ ಎಲಿಜ಼ಬೆತ್ ಪಡೆದಿದ್ದಳು. ಅವಳಿಂದ ಇವಳಿಗೂ ಅಸೂಯೆ, ಸಂಚುಗಾರಿಕೆ, ಅಪ್ರಾಮಾಣಿಕತೆ ಮುಂತಾದವು  ದತ್ತವಾಗಿದ್ದುವು. ಹೆನ್ರಿ_ಬೂಲಿನರದು ರಹಸ್ಯ ವಿವಾಹ. ಎಲಿಜ಼ಬೆತ್ಳಿಗೆ ಮೂರು ವರ್ಷವಾಗಿದ್ದಾಗ ತಾಯಿ ಮರಣದಂಡನೆಗೆ ಗುರಿಯಾದಳು. ತಂದೆ ಇನ್ನೊಬ್ಬಳನ್ನು (ಜೇನ್ ಸೇಮೋರ್) ಮದುವೆಯಾದದ್ದರಿಂದ ಇವಳೂ ಇವಳ ಮಲಸೋದರಿಯೂ ನ್ಯಾಯಬಾಹಿರ  ಸಂತಾನಗಳೆಂದು ಸಾರಲಾಯಿತು. ಇದರಿಂದ ಎಲಿಜ಼ಬೆತ್ ಏಕಾಂತದಲ್ಲಿ ಬಾಲ್ಯ ಕಳೆದಳು. ಈ ಕಾಲದಲ್ಲಿ ಇವಳಿಗೆ ಅಭಿಜಾತ ಸಾಹಿತ್ಯದಲ್ಲಿ ಒಳ್ಳೆಯ ಶಿಕ್ಷಣವೇನೋ ದೊರಕಿತು. ಗ್ರೀಕ್ ಲ್ಯಾಟಿನ್ ಭಾಷೆಗಳನ್ನು ಚೆನ್ನಾಗಿ ಕಲಿತಳು. ಈಕೆಗೆ ಫ್ರೆಂಚ್, ಇಟಾಲಿಯನ್,  
ಸ್ಪ್ಯಾನಿಷ್ ಭಾಷೆಗಳ ಪರಿಚಯವೂ ಆಯಿತು.  ತಂದೆ ಸತ್ತಮೇಲೆ ಆರನೆಯ ಎಡ್ವರ್ಡನೂ ಅವನ ಅನಂತರ ಮೇರಿಯೂ ಸಿಂಹಾಸನವೇರಿದಾಗ ಎಲಿಜ಼ಬೆತ್ ಅಜ್ಞಾತಳಾಗಿಯೇ ಉಳಿದಿದ್ದಳು, ಪ್ರಾಟೆಸ್ಟಂಟ್ ಮತ ಪ್ರೇಮಿಯೆಂಬ ಕಾರಣದಿಂದ ಪಿತೂರಿಯ ಸಂಶಯಕ್ಕೆ ಗುರಿಯಾಗಿ ಈಕೆ ಲಂಡನ್ ಗೋಪುರದಲ್ಲಿ  ಸೆರೆಯಾಗಿದ್ದಳು. ತಲೆ ಹೋಗದೆ ಉಳಿದುಕೊಂಡದ್ದು ಇವಳ ಅದೃಷ್ಟ. ಕೊನೆಗೆ ಮೇರಿಯೂ ಸತ್ತಾಗ ಎಲಿಜ಼ಬೆತಳಿಗೆ ಒಳ್ಳೆಯ ದೆಶೆ ಬಂತು. ಸೆರೆ ಅನುಭವಿಸಿದ್ದವಳು ಸಿಂಹಾಸನವನ್ನೇರಿದಳು (1558). ಆಗ ಇವಳಿಗೆ ಇಪ್ಪತ್ತೈದು ವರ್ಷ. 

ಎಲಿಜ಼ಬೆತ್ ಅಧಿಕಾರ ವಹಿಸಿದ ಸಮಯದಲ್ಲಿ ರಾಜ್ಯದಲ್ಲಿ ನೆಮ್ಮದಿಯಿರಲಿಲ್ಲ. ಎಂಟನೆಯ ಹೆನ್ರಿ ಮತ್ತು ಆರನೆಯ ಎಡ್ವರ್ಡರ ಧರ್ಮಸುಧಾರಣೆಗಳು ವಿಫಲವಾದ ಕಾರಣ ಈಕೆ ಪಟ್ಟಕ್ಕೆ ಬಂದಾಗ ತುಂಬ ಗೊಂದಲವಿತ್ತು. 1559ರಲ್ಲಿ ಜಾರಿಗೆ ಬಂದ ಪರಮಾಧಿಕಾರಿ ಶಾಸನದಿಂದ ಇಂಗ್ಲೆಂಡ್ನಲ್ಲಿ ಪೋಪ್ ಅಧಿಕಾರಕ್ಕೆ ಅಡ್ಡಿ ಒದಗಿತು. ಏಕರೂಪತೆಯ ಶಾಸನದ ಮೂಲಕ ಪ್ರಾರ್ಥನೆಯಲ್ಲಿ ಏಕರೂಪತೆ ತರಲು ಯತ್ನಿಸಲಾಯಿತು. ಈ ಎರಡು ಶಾಸನಗಳಿಂದ ರಾಜ್ಯದಲ್ಲಿ ಕ್ರೈಸ್ತಧರ್ಮದ ಮೇಲೆ ಈಕೆ ಅಧಿಕಾರ ಹೊಂದಿದ್ದರೂ ತನ್ನನ್ನು ಕ್ರೈಸ್ತಧರ್ಮ ಸರ್ವಾಧಿಕಾರಿಣಿ ಎಂದು ಕರೆದುಕೊಳ್ಳದೆ ಪ್ರಮುಖ ಕಾರ್ಯನಿರ್ವಾಹಕಿಯೆಂದು ಮಾತ್ರ ಕರೆದುಕೊಂಡಳು. ಅವಳ ಈ ಬದಲಾವಣೆಗಳಿಂದ ಸ್ವದೇಶ ಪರದೇಶಗಳಲ್ಲಿ ವಿರೋಧ ಎದ್ದರೂ ಧರ್ಮದ ಗೊಂದಲ ಪರಿಸ್ಥಿತಿಯ ನಿವಾರಣೆಯಾಯಿತು. 1559ರ ಈ ಕ್ರಮಗಳು ಆಧುನಿಕ ಇಂಗ್ಲೆಂಡ್-ಸ್ಕಾಟ್ಲೆಂಡ್ಗಳ ನಿರ್ಮಾಣಕ್ಕೆ ನಾಂದಿಯಾದವು. ಇವುಗಳ ಪ್ರಭಾವದಿಂದ ಮತ್ತು ಪರಿಸ್ಥಿತಿಗಳ ಒತ್ತಡದಿಂದ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ಗಳು ತಮ್ಮ ಅಂತಃಕಲಹಗಳಿಂದ ದೂರವಾಗಿ ಪ್ರಾಟೆಸ್ಟಂಟ್ ಧರ್ಮವನ್ನು ಅವಲಂಬಿಸಿ ಯುರೋಪಿನ ಕೆಥೊಲಿಕ್ ಪಂಥದ ರಾಜ್ಯಗಳೊಡನೆ ಹೋರಾಡಿದವು. ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಈಕೆ ದೇಶದಲ್ಲಿ ಕೈಗಾರಿಕೆಯನ್ನು ಪ್ರೋತ್ಸಾಹಿಸಿ, ವಿದೇಶವ್ಯಾಪಾರ ಹೆಚ್ಚಿಸಿ ಹಣದ ಉತ್ಪಾದನೆಯ ಮಾರ್ಗಗಳನ್ನು ತೋರಿಸಿಕೊಟ್ಟಳು. ಇಂಗ್ಲೆಂಡಿನ ನೌಕಾದಳ ಬಲಗೊಂಡಿತು. ಪರಿಶೋಧನೆಯ ಕಾರ್ಯ ಹೆಚ್ಚಿ ಇತರ ನಾಡುಗಳಿಂದ ಐಶ್ವರ್ಯ ಬಂತು. 16ನೆಯ ಶತಮಾನದ ಅಂತ್ಯದ ವೇಳೆಗೆ ಇಂಗ್ಲೆಂಡ್ ಪ್ರಪಂಚದ ಅತ್ಯಂತ ಶ್ರೀಮಂತ ರಾಷ್ಟ್ರವಾಯಿತು. 

ಎಲಿಜ಼ಬೆತ್ ರಾಣಿಯಾದ ಕಾಲದಲ್ಲಿ ಯುರೋಪಿನ ರಾಜಕೀಯ ಪರಿಸ್ಥಿತಿ ತುಂಬ ಹದಗೆಟ್ಟಿತ್ತು. ಫ್ರಾನ್ಸ್‌ ಮತ್ತು ಸ್ಪೇನ್ಗಳ ಪ್ರಭಾವ ಹೆಚ್ಚಾಗಿತ್ತು. ರಾಣಿಯಾದ ಮೇಲೆ ಈಕೆ ಧರ್ಮವಿಚಾರಗಳಲ್ಲಿ ಮಾಡಿದಂತೆ ಇಂಗ್ಲೆಂಡಿನ ರಾಜಕೀಯದಲ್ಲೂ ಸಮಯೋಚಿತವಾದ ಅನೇಕ ಬದಲಾವಣೆಗಳನ್ನು ಮಾಡಿದಳು. ವ್ಯಕ್ತಿಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆಗಳೆರಡೂ ಬೆಳೆದವು. ಎಲಿಜ಼ಬೆತ್ ಚಿಕ್ಕಂದಿನಲ್ಲಿ ಅಭ್ಯಸಿಸಿದ ಇಟಾಲಿಯನ್ ಗ್ರಂಥಗಳ ಆಧಾರದಿಂದ ಒಡಂಬಡಿಕೆಯ ರಾಜನೀತಿ ಅನುಸರಿಸಿ ಮಧ್ಯಮ ವರ್ಗದ ಜನತೆಯ ಬೆಂಬಲ ಪಡೆದಳು. ಈಕೆ  ಕೊನೆಯವರೆಗೂ ಅವಿವಾಹಿತೆಯಾಗೇ ಉಳಿದಳು. ಆದರೂ ಒನಪು, ಒಯ್ಯಾರ, ಹಾವಭಾವ, ಕುಶಾಗ್ರಬುದ್ಧಿ -ಇವುಗಳಲ್ಲಿ ಈಕೆ ಕಡಿಮೆಯಲ್ಲ.

ಈಕೆಯ ಪ್ರೇಮಜೀವನ ಕುತೂಹಲಕಾರಿ. ಇವಳ ಅಭಿಮಾನಕ್ಕೆ ಪಾತ್ರರಾದವರು ಅನೇಕ ಮಂದಿ. ಆದರೆ ಯಾರನ್ನೂ ಈಕೆ ಮದುವೆಯಾಗಲಿಲ್ಲ. ಅಂತೂ ಈ ವಿಚಾರವಾಗಿ ಊಹಾಪೋಹಗಳಿಗೆ ಕೊನೆಯೇ ಇಲ್ಲ. ಇದರ ಹಿಂದೆ ಪ್ರಮುಖವಾದ ರಾಜಕೀಯ ಸಾಮಾಜಿಕ ಹಾಗೂ ಮತೀಯ ರಹಸ್ಯಗಳು ತುಂಬಿದ್ದುವು. ಈಕೆಯ ಸಂಪುರ್ಣ ಸ್ವತಂತ್ರ್ಯ ಮನೋಭಾವವೂ ಈ ಒಂಟಿಜೀವನಕ್ಕೆ ಕಾರಣ. ತನ್ನ ಮದುವೆಯಿಂದ ಇಂಗ್ಲೆಂಡ್ ಅಸ್ವತಂತ್ರವಾದೀತೆಂಬ ಭೀತಿ ಈಕೆಗಿತ್ತು.

ಈಕೆಯ ರಾಜ್ಯಾಧಿಕಾರದ 45 ವರ್ಷಗಳ ಅವಧಿಯನ್ನು ಚರಿತ್ರಕಾರರು ಎಲಿಜ಼ಬೆತ್ ಯುಗವೆಂದು ಕರೆದಿದ್ದಾರೆ. ಇವಳ ಕಾಲದಲ್ಲಿ ಸಾಹಿತ್ಯ ಮತ್ತು ನಾಟಕ ಕಲೆಗಳ ಪುನರುಜ್ಜೀವನವೂ ಧರ್ಮಸುಧಾರಣೆಯೂ ಆದ್ದರಿಂದ ಈ ಕಾಲಕ್ಕೆ ಇವಳ ಹೆಸರೇ ಬಂತು. ಮಹಾಕವಿ ಷೇಕ್ಸ್‌ಪಿಯರ್, ಫ್ರಾನ್ಸಿಸ್ ಬೇಕನ್, ಎಡ್ಮಂಡ್ ಸ್ಪೆನ್ಸರ್, ವಾಲ್ಟರ್ ರಾಲಿ ಮೊದಲಾದ ಸಾಹಿತಿಗಳನ್ನು ಪ್ರೋತ್ಸಾಹಿಸಿದಳೆಂದು ಹೇಳಲಾಗಿದೆ. ಈಕೆಗೆ ಸಾಹಿತ್ಯಪ್ರೇಮ ಕಲಾವಂತಿಕೆಗಳಿದ್ದುವಾದರೂ ಆ ಕಾಲದ ಲೇಖಕರು ಅಭಿಮಾನಿಗಳು ಇವನ್ನು ಅತಿಯಾಗಿ ಉತ್ಪ್ರೇಕ್ಷೆ  
ಮಾಡಿದ್ದಾರೆ. ಷೇಕ್ಸ್‌ಪಿಯರನ ನಾಟಕಗಳಿಗೆ ಇವಳು ಹೋಗುತ್ತಿದ್ದಳಾದರೂ ಆತನ ಪ್ರತಿಭೆ ಇವಳ ಗಮನ ಸೆಳೆಯಲಿಲ್ಲ. 

ಎಲಿಜ಼ಬೆತ್ ದಿಟ್ಟ ರಾಣಿ. ತನ್ನ ಆತ್ಮೀಯರೆಲ್ಲರನ್ನೂ ಕಳೆದುಕೊಂಡರೂ ಪರಾವಲಂಬಿಯಾಗಲಿಲ್ಲ. ಕೊನೆಯ ದಿನಗಳನ್ನು ಒಂಟಿಯಾಗಿಯೇ ಕಳೆದು ನಿಧನಳಾದಳು.
ಎಲಿಜ಼ಬೆತ್ಳದು ವಿಚಿತ್ರವಾದ ಸ್ವಯಂವಿಶಿಷ್ಟವಾದ ರಾಷ್ಟ್ರಪ್ರೇಮ. ಆ ಕಾಲದ ಬೌದ್ಧಿಕ ಧರ್ಮಿಯ ಚಳವಳಿಗಳಲ್ಲಿ ಈಕೆಗೆ ಅಷ್ಟೇನೂ ಸಹಾನುಭೂತಿ ಇರಲಿಲ್ಲ. ಅತಿ ಮಡಿಯ ಪ್ರಾಟೆಸ್ಟಂಟ್ ಮನೋಭಾವವನ್ನು ಈಕೆ ಸಹಿಸುತ್ತಿರಲಿಲ್ಲ. ಬಾಲ್ಯದಲ್ಲಿ ಓದಿದ್ದಕ್ಕಿಂತ ಈಕೆ ಹೆಚ್ಚೇನೂ ಕಲಿಯಲಿಲ್ಲ. ಎಲಿಜ಼ಬೆತಳ ಜನಪ್ರಿಯತೆ ಅಸಾಧಾರಣ. ದಕ್ಷರಾದವರನ್ನು ಪತ್ತೆಹಚ್ಚಿ ಅವರನ್ನು ತನ್ನ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ಪ್ರತಿಭೆ ಇವಳಿಗೆ ಯಥೇಚ್ಛವಾಗಿತ್ತು. ಆದರೆ ಇವಳ ಆಳ್ವಿಕೆಯಲ್ಲಿ ಕೆಲವು ಕಪ್ಪು ಮಚ್ಚೆಗಳೂ ಉಂಟು. ಸ್ಕಾಟರ ರಾಣಿ ಮೇರಿಯನ್ನೂ ಇನ್ನೂ ಕೆಲವರನ್ನೂ ಈಕೆ ನಿರ್ದಯೆಯಿಂದ ಕೊಲ್ಲಿಸಿದಳು. ತನ್ನ ಸ್ಥಾನ ಭದ್ರತೆಗಾಗಿ ಈ ಕೊಲೆಗಳು ಆವಶ್ಯವೆಂದು ಇವಳು ಭಾವಿಸಿದ್ದಳು. ಅಸೂಯೆಯೂ ಒಂದು ಕಾರಣವೆನ್ನಬಹುದು. ಆದರೂ ಈಕೆಯ ಆಳ್ವಿಕೆಯ ಕಾಲ ಇಂಗ್ಲೆಂಡ್ನ ವೈಭವದ ಕಾಲ.	

(ಎಚ್.ಆರ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ